Skip to main content

ನಮ್ಮ ಸಂಸ್ಥಾಪಕರು

ಡಾ.ರಾಜ್ ಕುಮಾರ್

ನಿರಾಶ್ರಿತ ಹೆಣ್ಣುಮಕ್ಕಳು ತಮಗೊಂದು ನೆಲೆಯಿಲ್ಲದೆ ಅನುಭವಿಸುವ ಸಂಕಷ್ಟಕ್ಕೆ ಮರುಗಿದ ಡಾ.ರಾಜ್ ಕುಮಾರ್ ಅವರು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯನವರ ಜೊತೆಗೂಡಿ, ನಿರಾಶ್ರಿತ ಮಹಿಳೆಯರಿಗೆ ನೆಲೆ ಕಲ್ಪಿಸುವ ಏಕೈಕ ಉದ್ದೇಶದಿಂದ ಶಕ್ತಿಧಾಮವನ್ನು ಸ್ಥಾಪಿಸಿದರು.
ಅಣ್ಣಾವ್ರು ಎಂದೇ ಪ್ರೀತಿಯಿಂದ ಕರೆಯಲ್ಪಡುವ ಡಾ. ರಾಜ್ ಕುಮಾರ್, ಭಾರತೀಯ ಚಿತ್ರರಂಗದ ಪ್ರತಿಭಾವಂತ ಕಲಾವಿದರಲ್ಲೊಬ್ಬರು. ಅವರು ಕರ್ನಾಟಕದ ದಂತಕತೆಯೆಂದೇ ಪ್ರಸಿದ್ಧರಾದವರು. ನಟನೆ ಮಾತ್ರವಲ್ಲದೆ, ನಾಡಿನ ಸಾಂಸ್ಕೃತಿಕ – ಸಾಮಾಜಿಕ ರಾಯಭಾರಿಯಾಗಿಯೂ ಡಾ.ರಾಜ್ ಕುಮಾರ್ ಮನ್ನಣೆ ಗಳಿಸಿದ್ದರು. ಸಿನಿಮಾ ರಂಗದಲ್ಲಿನ ಸಾಧನೆಗಾಗಿ 1983ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರು ಸಮಾಜದ ಮೇಲೆ ಪ್ರಭಾವ ಬೀರಬಲ್ಲ ಆದರ್ಶ ವ್ಯಕ್ತಿಯಾಗಿಯೂ ಜನಮೆಚ್ಚುಗೆಗೆ ಪಾತ್ರರಾಗಿದ್ದರು.

ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್

ಡಾ,ರಾಜ್ ಕುಮಾರ್ ಅವರ ಪತ್ನಿ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರು ಶಕ್ತಿಧಾಮದ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ಪ್ರಮುಖರು. ಅವರು ಡಾ.ರಾಜ್ ಕುಮಾರ್ ಅವರ ಆದರ್ಶವನ್ನೇ ಅನುಸರಿಸಿ ಶಕ್ತಿಧಾಮದ ಪ್ರತಿಯೊಂದು ವಿಭಾಗದಲ್ಲಿ ತೊಡಗಿಕೊಂಡು, ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಿದರು. ಶಕ್ತಿಧಾಮದ ಮುಖ್ಯ ಆಧಾರ ಸ್ತಂಭವಾಗಿದ್ದ ಡಾ. ಪಾರ್ವತಮ್ಮ ರಾಜ್ ಕುಮಾರ್, ಭಾರತೀಯ ಚಿತ್ರರಂಗದ ಗಣನೀಯ ನಿರ್ಮಾಪಕರು ಮತ್ತು ವಿತರಕರೂ ಆಗಿದ್ದರು. ಸಮಾಜ ಮತ್ತು ಸಿನಿಮಾ ಕ್ಷೇತ್ರಗಳಲ್ಲಿನ ಅವರ ಸೇವೆಗಾಗಿ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅದರ ಜೊತೆಗೇ ಫಾಲ್ಕೆ ಅಕಾಡಮಿ ಅವಾರ್ಡ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಸರ್ಕಾರ ಕೊಡಮಾಡುವ ಜೀವಮಾನದ ಸಾಧನೆ ಪ್ರಶಸ್ತಿಗಳೂ ಅವರನ್ನು ಅಲಂಕರಿಸಿವೆ.

ಶ್ರೀ ಕೆಂಪಯ್ಯ ಐಪಿಎಸ್

ಶ್ರೀ ಕೆಂಪಯ್ಯನವರು ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ. ಶಕ್ತಿಧಾಮ ಆರಂಭಗೊಂಡ ದಿನದಿಂದ ಇಂದಿನವರೆಗೂ ಇವರ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತಿದೆ. ಸಂಸ್ಥೆಗೆ ಮಾನವೀಯ ಸ್ಪರ್ಶ ಮತ್ತು ಆಡಳಿತದಲ್ಲಿ ಕ್ರಮಬದ್ಧತೆಯನ್ನು ತರುವ ಮೂಲಕ ಇವರು ಶಕ್ತಿಧಾಮದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಶ್ರೀ ಕೆಂಪಯ್ಯನವರು ಮೈಸೂರು ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಹಾಗೆಯೇ ರಾಜೀವ್ ಗಾಂಧಿ ಹಂತಕರನ್ನು ಬೆಂಗಳೂರಿನಲ್ಲಿ ಬೇಟೆಯಾಡಿದ ಖ್ಯಾತಿಯೂ ಇವರ ಪಾಲಿಗಿದೆ. ಮೈಸೂರಿನ ಶಿಥಿಲಗೊಂಡ ಪೊಲೀಸ್ ಠಾಣೆಗಳನ್ನು ಅವುಗಳ ಪಾರಂಪರಿಕ ವಾಸ್ತುಶಿಲ್ಪಕ್ಕೆ ಧಕ್ಕೆಯಾಗದಂತೆ ನವೀಕರಿಸಿದ್ದ ಕೆಂಪಯ್ಯನವರನ್ನು ‘ಪೊಲೀಸ್ ಇಲಾಖೆಯ ನವೋದಯ ಪುರುಷ’ ಎಂದೂ ಕರೆಯಲಾಗುತ್ತದೆ.

ನಮ್ಮ ಉದ್ದೇಶವನ್ನು ಬೆಂಬಲಿಸಿ